ರಾಮನಾಮವ ನುಡಿ ನುಡಿ

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ
ಶ್ರೀರಾಮನಾಮವ ನುಡಿ ನುಡಿ

ಗುರುಗಳ ಚರಣವ ಹಿಡಿ ಹಿಡಿ
ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ

ಕರಿರಾಜವರದನ ಸಾರೋ ಸಾರೋ ಶ್ರಮ
ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ


ರಾಗ: ನಾದನಾಮಕ್ರಿಯೆ                      ತಾಳ: ಆದಿ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ಕೃಷ್ಣರು ಮನೆಗೆ ಬಂದರು

ರಾಮ ಕೃಷ್ಣರು ಮನೆಗೆ ಬಂದರು, ಬಾಗಿಲು ತೆರೆಯಿರೆ
ಕಾಮಧೇನು ಬಂದಂತಾಯಿತು ವರವ ಬೇಡಿರೆ

ಚೆಂಡು ಬುಗುರಿ ಚಿಣ್ಣಿಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ

ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಸುಕುಮಾರ ಸುಂದರವಾದ ಉಡಿಗೆ ಉಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ

ಪೊಕ್ಕುಳಲಿ ಅಜನ ಪಡೆದ ದೇವದೇವನು
ಚಿಕ್ಕ ಅಂಗುಷ್ಟದಲ್ಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯನವ ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು

ರಾಗ: ಜಂಜೂಟಿ                                  ತಾಳ: ಆದಿ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ಎಂಬೊ ಎರಡಕ್ಷರದ ಮಹಿಮೆಯನು

ರಾಮ ಎಂಬೊ ಎರಡಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ

ರಾ ಎಂದ ಮಾತ್ರದೊಳು ರಕ್ತಮಾಂಸದೊಳಿದ್ದ
ಆಯಸ್ತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೊಗದಂತೆ ಕವಾಟವಾಗಿ
ಚಿತ್ತಕಾಯಗಳ ಪವಿತ್ರಮಾಡುವ ಪರಿಯ
ಭಕ್ತವರ ಹನುವಂತನೊಬ್ಬ ತಾ ಬಲ್ಲ

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರವಿಟ್ಠಲನ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ


ರಾಗ: ಕಾಂಬೋದಿ          ತಾಳ: ಝಂಪೆ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಗಿ ತಂದೀರಾ ಭಿಕ್ಷಕೆ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ

ಮಾತಾಪಿತೃಗಳ ಸೇವಿಪರಾಗಿ
ಪಾಪ ಕಾರ್ಯದ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನವೃತ್ತಿಯಲಿ ಹೀನರಾಗಿ

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ
ಭಿಕ್ಷುಕರು ಅತಿ ತುಚ್ಛರಾಗಿ

ವೇದ ಪುರಾಣದ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ

ಸಿರಿ ರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ

ರಾಗ: ನಾದನಾಮಕ್ರಿಯೆ        ತಾಳ: ಛಾಪು

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ರಕ್ಷಿಸು ಲೋಕನಾಯಕನೆ ರಕ್ಷಿಸು

ರಕ್ಷಿಸು ಲೋಕನಾಯಕನೆ ರಕ್ಷಿಸು

ಎಷ್ಟೆಷ್ಟು ಜನ್ಮವ ಕಳೆದೆನೊ 
ಇನ್ನೆಷ್ಟು ಜನ್ಮವ ಕಳೆವೆನೊ
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸೊ ಇಭರಾಜವರದನೆ

ಬಾಲತನದಿ ಬಹು ನೊಂದೆನೊ ನಾನಾ
ಲೀಲೆಯಿಂದಲಿ ಕಾಲಕಳೆದೆನೊ
ಲೋಲಲೋಚನ ಎನ್ನ ಮೊರೆ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೊ ನರಹರಿ

ಮುದುಕನಾಗಿ ಚಿಂತೆಪಡುವೆನೊ ನಾ
ಕದಡು ದುಃಖ ಪಡಲಾರೆನೊ
ಉದಧಿಶಯನ ಶ್ರೀ ಪುರಂದರವಿಠಲ
ಮುದದಿಂದ ರಕ್ಷಿಸೊ ಖಗರಾಜ ಗಮನ

ರಾಗ: ಶಂಕರಾಭರಣ             ತಾಳ: ಅಟ್ಟ

ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ

ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ

ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕೈಮುಗಿದು ಓಲೈಪರು
ಘನ ಶುಕ ಶೌನಕ ವ್ಯಾಸ ವಾಲ್ಮೀಕರು 
ನೆನೆದು ಕೊಂಡಾಡುವರೊ ಹರಿಯೆ

ಸುರರು ಕಿನ್ನರರು ಕಿಂಪುರುಷರು ಉರಗರು 
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದುದಯಾಚಲದಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀಹರಿಯೆ

ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ

ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೆ

ರಾಗ: ಮೋಹನ            ತಾಳ: ಅಟ್ಟ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಂಗ ಬಾರೋ ರಂಗ ಬಾರೋ

ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ
ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ

ವೆಂಕಟರಮಣನೆ ಬಾರೋ ಪಂಕಜ ಚರಣವ ತೋರೋ
ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿ ರವದಿಂದ

ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ
ಪನ್ನಗಶಯನನೆ ನಿನ್ನ ಚಿನ್ನದ ಸರ ಹೊಳೆವುತ್ತ ಬಾರೋ

ಬಡನಡುವಿನ ಘಂಟೆ ಬಳುಕಿ ಢಣಢಣಿಸುತ್ತ
ಕಡಗ ಕಾಲಂದುಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತ ಬಾರೋ

ಮುಂಗುರುಳಿನ ಸೊಬಗಿನಿಂದ ರಂಗ ನಿನ್ನ ಫಣೆಯೊಳಿಟ್ಟ
ರಂಗು ಮಾಣಿಕ್ಯದರಳೆಲೆ ತೂಗಿ ತೂಗಿ ಓಲಾಡುತ್ತ ಬಾರೋ

ಕೊರಳಿಗಹಾಕಿದ ಹುಲಿಯುಗುರು ತೋರಮುತ್ತಿನ ಹಾರಂಗಳ್ಹೂಳೆಯುತ್ತ
ಪರಿಪರಿ ವಿಧಗಳಿಂದ ಪುರಂದರವಿಠಲ ಬಾರೋ



ರಾಗ: ಮೋಹನ                           ತಾಳ: ಅಟ್ಟ



ಯಾರೆ ರಂಗನ ಯಾರೆ ಕೃಷ್ಣನ

ಯಾರೆ ರಂಗನ ಯಾರೆ ಕೃಷ್ಣನ
ಯಾರೆ ರಂಗನ ಕರೆಯ ಬಂದವರು

ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯ ಬಂದವರು

ವೇಣುವಿನೋದನ ಪ್ರಾಣಪ್ರಿಯನ
ಜಾಣೆಯರರಸನ ಕರೆಯ ಬಂದವರು

ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯ ಬಂದವರು


ರಾಗ: ಶಂಕರಾಭರಣ       ತಾಳ: ಆದಿ






ಯಾರೆ ಬಂದವರು ಮನೆಗೆ

ಯಾರೆ ಬಂದವರು ಮನೆಗೆ ಮತ್ಯಾರೆ ಬಂದವರು
ನಾರಾಯಣ ಕೃಷ್ಣ ನಾಥನಲ್ಲದೆ ಬೇರೆ

ವಜ್ರರೇಖೆಗಳಿವೆ ಮನೆಯಲ್ಲಿ ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ

ಕೊಂಬು ಕೊಳಲು ರಭಸಗಳಿವೆ
ಕದಂಬ ಕಸ್ತೂರಿ ಪೆಂಪೆಸೆದಿವೆ
ಪೂಂಬಟ್ಟೆ ಚಲ್ಲಣ ಚಲ್ಲಿದೆ ಹಾಲು
ಕುಂಭ ಒಡೆದು ಮನೆತುಂಬ ಬೆಳ್ಳಗಾಯಿತು 

ಮಿಂಚು ಹುಳದಂತೆ ಹೊಳೆವುತ ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೆ

ರಾಗ: ಸೌರಾಷ್ಟ್ರ       ತಾಳ: ಅಟ್ಟ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾರೂ ಸಂಗಡ ಬಾಹೋರಿಲ್ಲ

ಯಾರೂ ಸಂಗಡ ಬಾಹೋರಿಲ್ಲ
ನಾರಾಯಣ ನಿಮ್ಮ ನಾಮ ಒಂದಲ್ಲದೆ

ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆ ಬಾಹಳೆ

ದೇವವಿಪ್ರರು ಅಗ್ನಿ ಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರೆಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು 
ಇನ್ನಾವ ಗತಿಯಿಂದೆನುತ ಗೋಳಿಡುವಳಲ್ಲದೆ

ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕ್ಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ

ಪುತ್ರ ಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು

ಯಮನು ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ

ರಾಗ: ಮೋಹನ        ತಾಳ: ಅಟ್ಟ


ಯಾರು ಬಿಟ್ಟರೂ ಕೈಯ ನೀ ಬಿಡದಿರು

ಯಾರು ಬಿಟ್ಟರೂ ಕೈಯ ನೀ ಬಿಡದಿರು ಕಂಡ್ಯ ನಾರಾಯಣ ಸ್ವಾಮಿ
ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ ನಾರಾಯಣ

ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ ನಾರಾಯಣ ಸ್ವಾಮಿ
ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ನಾರಾಯಣ
ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ ನಾರಾಯಣ ಬಹು
ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ ನಾರಾಯಣ

ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು ನಾರಾಯಣ ಸ್ವಾಮಿ
ಹಂಬಲಿಸಿದರಂಜಬೇಡವೆಂಬುವರಿಲ್ಲ ನಾರಾಯಣ
ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ ನಾರಾಯಣ ಸ್ವಾಮಿ
ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ ನಾರಾಯಣ

ಶಿಶು ಅವತಾರದಿ ಪಶುಗಳ ನೀ ಕಾಯ್ದೆ ನಾರಾಯಣ ಸ್ವಾಮಿ
ದಶ ಅವತಾರದಿ ಚಕ್ರವ ತಾಳಿದೆ ನಾರಾಯಣ
ವಿಷದ ಕಾಳಿಂಗನ ಮಡುವ ಕಲಕಿ ಬಂದೆ ನಾರಾಯಣ ಸ್ವಾಮಿ
ವಸುಧೆಯೊಳಧಿಕ ಪುರಂದರವಿಠಲನೆ ನಾರಾಯಣ

ರಾಗ: ನಾದನಾಮಕ್ರಿಯೆ                                    ತಾಳ: ಆದಿ

ಯಾರು ಒಲಿದರೇನು

ಯಾರು ಒಲಿದರೇನು ನಮಗಿ-
ನ್ನಾರು ಮುನಿದರೇನು

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ

ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ

ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ

ರಾಗ: ಆನಂದಭೈರವಿ                                                       ತಾಳ: ಆದಿ

ಯಾದವ ನೀ ಬಾ ಯದುಕುಲ ನಂದನ

ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೊ

ಸೋದರಮಾವನ ಮಧುರೆಲಿ ಮಡುಹಿದ ಯ-
ಶೋದೆ ನಂದನ ನೀ ಬಾರೊ

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲ್ ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೊ
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೊ

ಖಗವಾಹನನೆ ಬಗೆಬಗೆಯಿಂದಲಿ
ನಗೆಮೊಗದರಸನೆ ನೀ ಬಾರೊ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೊ


ರಾಗ: ಜುಲಾಪ್             ತಾಳ: ಅಟ್ಟ

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ ಕಾಕುಮಾಡದೆ ಕಾಯೊ ಭವದೊಳಗೆ ಬಳಲಿದೆನು

ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದಮತಿಯಿಂದ ಬಲು ಮರುಳಾದೆನೊ
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡಮೋಚಿದೆ ನಾನು ಇನ್ನಾರು ಗತಿ ಎನಗೆ
ಪುಂಡರೀಕಾಕ್ಷ ನೀ ಕರುಣಿಸೈ ಎನ್ನ

ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರವಿಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ


ರಾಗ: ಮುಖಾರಿ                           ತಾಳ: ಅಟ್ಟ

ಯಾಕೆ ಮೂರ್ಖನಾದ್ಯೋ ಮನುಜ


ಯಾಕೆ ಮೂರ್ಖನಾದ್ಯೋ ಮನುಜ
ಯಾಕೆ ಮೂರ್ಖನಾದ್ಯೋ

ಯಾಕೆ ಮೂರ್ಖನಾದ್ಯೋ ನೀನು
ಕಾಕುಬುದ್ಧಿಯನ್ನು ಬಿಟ್ಟು
ಲೋಕನಾಥನನ್ನು ನೆನೆ ಕಂಡ್ಯ ಮನುಜ

ಸಾಧು ಸಜ್ಜನ ಸಂಗ ಮಾಡು
ಭೇದಾಭೇದ ತಿಳಿದು ನೋಡು
ವಾದ ಬುದ್ಧಿ ಮಾಡುವರೇನೋ ಮನುಜ

ದಾನ ಧರ್ಮವನ್ನು ಮಾಡು
ಜ್ಞಾನದಿಂದ ತಿಳಿದು ನೋಡು
ಹೀನಬುದ್ಧಿ ಮಾಡುವರೇನೋ ಮನುಜ

ಮಕ್ಕಳು ಹೆಂಡಿರು ತನ್ನವರೆಂದು
ರೊಕ್ಕವನ್ನು ಗಳಿಸಿಕೊಂಡು
ಸೊಕ್ಕಿನಿಂದ ತಿರುಗುವರೇನೋ ಮನುಜ

ಅಂತಕನ ದೂತರು ಬಂದು
ಕಂತೆ ಕಟ್ಟು ಹೊರಡು ಎಂದು
ನಿಂತರೆಲ್ಲರು ಬಿಡಿಸುವರೇನೋ ಮನುಜ

ಅರಿಷಡ್ವರ್ಗದ ಆಟವ ಬಿಟ್ಟು
ಪುರಂದರವಿಠಲನ ಧ್ಯಾನದೊಳಿಟ್ಟು
ಪರಗತಿ ದಾರಿಯ ನೋಡೋ ಮನುಜ

ರಾಗ: ನಾದನಾಮಕ್ರಿಯೆ                         ತಾಳ: ಆದಿ

ಯಾಕೆ ನಿರ್ದಯನಾದೆ ಎಲೊ ದೇವನೆ

ಯಾಕೆ ನಿರ್ದಯನಾದೆ ಎಲೊ ದೇವನೆ

ಶ್ರೀಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ

ಸಿರಿದೇವಿಗೆ ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೆ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ

ರಾಗ: ಕಾಂಬೋದಿ     ತಾಳ: ಝಂಪೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾಕೆ ಚಿಂತಿಸುತಿದ್ದಿ ಕೋತಿಮನವೆ

ಯಾಕೆ ಚಿಂತಿಸುತಿದ್ದಿ ಕೋತಿಮನವೆ
ಲೋಕನಾಥನ ನೆನೆದು ಸುಖಿಯಾಗು ಮನವೆ

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು
ಕಟ್ಟಕಡೆಯಲಿ ಲಯಕೆ ಯಾರ ಚಿಂತೆ
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ

ನವಿಲಿಗೆ ಚಿತ್ರಪತ್ರವನಾರು ಬರೆದವರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಣಿಗೆ ಹಸುರು ಬಳಿದವರಾರು
ಅವ ಮಾಡಿದವ ನಮ್ಮ ಮರೆತಿಹನೆ ಮರುಳೆ

ಬಸುರೊಳಗೆ ಶಿಶುವನು ಅದಾರು ಸಲಹಿದವರು
ವಸುಧೆಯನು ಬಸುರೊಳಗೆ ಇಟ್ಟವರು ಯಾರು
ಹಸಗೆಡದೆ ನಮ್ಮ ಶ್ರೀ ಪುರಂದರವಿಠಲನ
ಬಿಸಜಪಾದವ ನಂಬಿ ಸುಖಿಯಾಗು ಮರುಳೆ

ರಾಗ: ಭೈರವಿ                  ತಾಳ: ಝಂಪೆ


ಯಮನೆಲ್ಲೋ ಕಾಣೆನೆಂದಹೇಳಬೇಡ

ಯಮನೆಲ್ಲೋ ಕಾಣೆನೆಂದಹೇಳಬೇಡ
ಯಮನೆ ಶ್ರೀರಾಮನು ಸಂದೇಹ ಬೇಡ

ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ

ನಂಬಿದ ಅರ್ಜುನನಿಗೆ ಭೃತ್ಯನಾದ
ನಂಬದ ದುರ್ಯೋಧನನಿಗೆ ಮೃತ್ಯುವಾದ

ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದ ಹಿರಣ್ಯಕನಿಗೆ ಉರಿಯಾದ

ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ

ನಂಬಿಕೊಳ್ಳಿ ಬೇಗ ಶ್ರೀಕೃಷ್ಣದೇವನ
ಕಂಬು ಚಕ್ರಧಾರಿ ಪುರಂದರವಿಠಲನ

ರಾಗ: ಶಂಕರಾಭರಣ       ತಾಳ: ಆದಿ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಮೋಸ ಹೋದೆನಲ್ಲಾ

ಮೋಸ ಹೋದೆನಲ್ಲಾ ತಿಳಿಯದೆ ಮೋಸ ಹೋದೆನಲ್ಲಾ

ಕ್ಲೇಶಪಾಶವನು ನಾಶಮಾಡುವ
ಶ್ರೀಶನಂಘ್ರಿಗಳ ಲೇಸಾಗಿ ಸ್ಮರಿಸದೆ

ಕಾಯದಾಶೆಯಿಂದ ಕಂಡದ್ದು ಬೇಡಿ ಶ್ವಾನನಂತೆ
ಮಾಯಪಾಶದಲಿ ಸಿಲುಕಿ ನಾನು ಮಾರಮಣನೆ ನಿನ್ನ ಧ್ಯಾನಮಾಡದೇ

ಪುಷ್ಪ ಜಾಜಿಗಳನು ಮಲ್ಲಿಗೆ ಭಕ್ತಿಭಾವದಿಂದ ತಂದು
ಕೃಷ್ಣಾವತಾರನ ಪೂಜೆಯ ಮಾಡಿ ವಿಷ್ಣುಲೋಕವನು ಸೂರೆಗೊಳ್ಳದೆ

ಸತಿಸುತಾದಿ ಬಂಧುಬಳಗ ಹಿತವ ನುಡಿವರ್ಯಾರೋ
ಗತಿ ನೀನೆ ತಂದೆತಾಯಿ ನೀನೆ ಸದ್ಗತಿ ಈಯೋ ಪುರಂದರವಿಟ್ಠಲ


ರಾಗ: ಧನ್ಯಾಸಿ                                               ತಾಳ: ಆದಿ