ಯಾರು ಬಿಟ್ಟರೂ ಕೈಯ ನೀ ಬಿಡದಿರು

ಯಾರು ಬಿಟ್ಟರೂ ಕೈಯ ನೀ ಬಿಡದಿರು ಕಂಡ್ಯ ನಾರಾಯಣ ಸ್ವಾಮಿ
ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ ನಾರಾಯಣ

ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ ನಾರಾಯಣ ಸ್ವಾಮಿ
ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ನಾರಾಯಣ
ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ ನಾರಾಯಣ ಬಹು
ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ ನಾರಾಯಣ

ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು ನಾರಾಯಣ ಸ್ವಾಮಿ
ಹಂಬಲಿಸಿದರಂಜಬೇಡವೆಂಬುವರಿಲ್ಲ ನಾರಾಯಣ
ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ ನಾರಾಯಣ ಸ್ವಾಮಿ
ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ ನಾರಾಯಣ

ಶಿಶು ಅವತಾರದಿ ಪಶುಗಳ ನೀ ಕಾಯ್ದೆ ನಾರಾಯಣ ಸ್ವಾಮಿ
ದಶ ಅವತಾರದಿ ಚಕ್ರವ ತಾಳಿದೆ ನಾರಾಯಣ
ವಿಷದ ಕಾಳಿಂಗನ ಮಡುವ ಕಲಕಿ ಬಂದೆ ನಾರಾಯಣ ಸ್ವಾಮಿ
ವಸುಧೆಯೊಳಧಿಕ ಪುರಂದರವಿಠಲನೆ ನಾರಾಯಣ

ರಾಗ: ನಾದನಾಮಕ್ರಿಯೆ                                    ತಾಳ: ಆದಿ

No comments: