ಯಾರು ಒಲಿದರೇನು

ಯಾರು ಒಲಿದರೇನು ನಮಗಿ-
ನ್ನಾರು ಮುನಿದರೇನು

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ

ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ

ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ

ರಾಗ: ಆನಂದಭೈರವಿ                                                       ತಾಳ: ಆದಿ

No comments: