ಅಂಗನರೆಲ್ಲ ನೆರೆದು ಚಪ್ಪಾಳಿಕ್ಕು


ಅಂಗನರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಪಾಡಿ ಮಲಹರಿ ಭೈರವಿ ಸಾರಂಗಿ ದೇಶಿ
ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಢಂಢಣಢಣಿರೆಂದು ಹಿಡಿದು ಕುಣಿಸುವರು

ತಿತ್ತಿರಿ ಮೌಳಿ ತಾಳ ದಂಡಿಗೆ ಮದ್ದಲೆ
ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರು ಥೈ ತಥೈ ಥಾಯೆಂದು
ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ
ಪ್ರೇಮದಿಂ ಬಿಗಿ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತಜನರೊಡೆಯ
ಸ್ವಾಮಿ ಶ್ರೀ ಪುರಂದರವಿಠಲರಾಯನ್ನ

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ


ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಭಯವು ಇನ್ಯಾತಕಯ್ಯಾ

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ

ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ

ಶ್ರೀಪತಿಯು ನಮಗೆ ಸಂಪದವೀಯಲಿ


ಶ್ರೀಪತಿಯು ನಮಗೆ ಸಂಪದವೀಯಲಿ

ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ


ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ

ಹರ ನಮಗೆ ಸತತ ಸಹಾಯಕನಾಗಲಿ

ನರರೊಳುನ್ನತವಾದ ಭೋಗ ಭಾಗ್ಯಂಗಳನು

ಪುರುಹೂತ ಪೂರ್ಣ ಮಾಡಿಸಲಿ ನಮಗೆ


ವಿನುತ ಸಿದ್ದಿಪ್ರದನು ವಿಘ್ನೇಶ ದಯದಿಂದ

ನೆನೆದ ಕಾರ್ಯಗಳೆಲ್ಲ ನೆರೆವೇರಲಿ

ದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದು

ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ

ನಿರುತ ಸುಜ್ಞಾನವನು ಈವ ಮಧ್ವರಾಯ

ಗುರುಗಳಾಶೀರ್ವಾದ ನಮಗಾಗಲಿ


ಪುರಂದರವಿಠಲನ ಕರುಣದಿಂದಲಿ ಸಕಲ

ಸುರರೊಲುಮೆ ನಮಗೆ ಸುಸ್ಥಿರವಾಗಲಿ