ದೇವಕಿ ಕಂದ ಮುಕುಂದ


ದೇವಕಿ ಕಂದ ಮುಕುಂದ

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ

ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ

ವರ ವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲ ಗುಣಪೂರ್ಣ

ದುರಿತಗಜ ಪಂಚಾನನ


ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯಬೇಕೆನ್ನ

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸಡುವರೆ ಗೋವಿಂದ

ಅರಸು ಮುಟ್ಟಲು ದಾಸಿ ರಂಭೆಯು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ

ಹೆಸರುಳ್ಲ ನದಿಗಳನೊಳಗೊಂಬ ಜಲಧಿಯು
ಬಿಸುಡುವನೆ ಕಾಲುಹೊಳೆಗಳನು ಗೋವಿಂದ

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಮರೆಹೋಗಲೇಕೆ ಗೋವಿಂದ

ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ
ವರದ ಪುರಂದರವಿಠಲ ಗೋವಿಂದ

ತೂಗಿರೆ ರಂಗನ ತೂಗಿರೆ ಕೃಷ್ಣನ


ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರಕನ್ನಿಕೆಯರು ಚಂದದಿ ಬಂದು ಮು-
ಕುಂದನ ತೊಟ್ಟಿಲ ತೂಗಿರೆ

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲಕುಂತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗುಯೆಂದು
ಬಾಲಕೃಷ್ಣನ ತೂಗಿರೆ

ಸಾಸಿರನಾಮನೆ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳ್ ಶೇಷನ ತುಳಿದಿಟ್ಟ
ದೋಷವಿದೂರನ ತೂಗಿರೆ

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟುಲ ತೂಗಿರೆ
ಸಿರಿದೇವಿ ರಮಣನ ಪುರಂದವಿಠಲನೆ
ಕರುಣದಿ ಮಲಗೆಂದು ತೂಗಿರೆ